ನೀಲಿಗಿಡ

ಫ್ಯಾಬೇಸೀ (ಲೆಗ್ಯೂಮಿನೋಸೀ) ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ಗಿಡ (ಇಂಡಿಗೋಫೆರ) ಇಂಡಿಗೋಫೆರಟಿಂಕ್ಟೋರಿಯ ಇದರ ವೈಜ್ಞಾನಿಕ ಹೆಸರು. ಅಮೆರಿಕ, ಆಫ್ರಿಕ, ಏಷ್ಯ, ಆಸ್ಟ್ರೇಲಿಯಗಳಲ್ಲೆಲ್ಲ ಕಂಡುಬರುತ್ತದೆ. ಭಾರತದಲ್ಲೂ ಬೆಳೆಸುವುದಿದೆ. ಇದು 1-2 ಮೀಟರ್ ಎತ್ತರಕ್ಕೆ ಬೆಳೆಯುವ ಪೊದೆಸಸ್ಯ. ಎಲೆಗಳು ಏಕಪಿಚ್ಛಕ ಸಂಯುಕ್ತ ಮಾದರಿಯವು. ಹೂಗಳ ಬಣ್ಣ ಕೆಂಪು.

ನೀಲಿಗಿಡದ ಬೆಳೆಯನ್ನು ಕರ್ನಾಟಕದ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಮಧುಗಿರಿ, ಯಳಂದೂರು ತಾಲ್ಲೂಕುಗಳಲ್ಲಿ ಕಾಣಬಹುದು. ಇದನ್ನು ನೀರಾವರಿ ಇಲ್ಲವೆ ತರಿ ಬೆಳೆಯನ್ನಾಗಿ ಬೆಳೆಯಬಹುದು. ಕೆಂಪುಮಿಶ್ರಿತ ಮಣ್ಣು, ಮೆಕ್ಕಲು ಇಲ್ಲವೆ ಗೋಡು ಮಣ್ಣಿನಲ್ಲಿ ಬತ್ತದ ಸಂಗಡ ಪರ್ಯಾಯ ಬೆಳೆಯಾಗಿಯೂ ನೀರಾವರಿಯಾದರೆ ಕಪ್ಪುಮಿಶ್ರಿತ ಜೇಡಿಮಣ್ಣಿನಲ್ಲಿ, ಆದರೆ ನೀರುನಿಲ್ಲದಂಥ ಭೂಮಿಯಲ್ಲಿ ಬೆಳೆಯುವುದಿದೆ. ಭೂಮಿಯನ್ನು 3-4 ಸಲ ನೇಗಿಲು ಹೊಡೆದು ಹಲುಬೆಯಿಂದ ಹೆಂಟೆ ಒಡೆದು ಸಮತಟ್ಟಾಗಿ ಮಾಡಿ ಹದಗೊಳಿಸಿ ಬೀಜಗಳನ್ನು 0.5 ಮೀ. ಅಂತರದಲ್ಲಿ ಬಿತ್ತಲಾಗುತ್ತದೆ. ಬೀಜಗಳ ಹೊದಿಕೆ ಗಟ್ಟಿಯಾಗಿ ಇರುವುದರಿಂದ ನೀರಿನಲ್ಲಿ 2-3 ದಿನ ನೆನೆಸಿ ಅಥವಾ ಮರಳಿನಲ್ಲಿ ಮಿಶ್ರಮಾಡಿ ಒನಕೆಯಿಂದ ಹಗುರವಾಗಿ ಕುಟ್ಟಿಹಾಕಿ ಬೀಜಗಳು ಚೆನ್ನಾಗಿ ಮೊಳೆಯುವಂತೆ ಮಾಡಲಾಗುತ್ತದೆ. ಎಕರೆಗೆ 6-7 ಕೆಜಿ ಬೀಜ ಬೇಕು. ಗಿಡಗಳು ಹೂಬಿಡಲು ಪ್ರಾರಂಭಿಸಿದ ಅನಂತರ ಅಂದರೆ 21/2 ಸಲ ಕೊಯ್ಯಬಹುದು. ಎಲೆಗಳಿಂದ ನೀಲಿಯನ್ನು ಪಡೆಯಲು 3-4 ವಿಧಾನಗಳುಂಟು. ಆದರೆ ಸಾಮಾನ್ಯವಾಗಿ ಎಲೆ ಹಾಗೂ ಟಿಸಿಲುಗಳನ್ನು ಕೊಯ್ದು ಸಿಮೆಂಟಿನ ತೊಟ್ಟಿಯಲ್ಲಿ ಹಾಕಿ ನೀರಲ್ಲಿ ನೆನಸಿ ಭಾರವಾದ ವಸ್ತುಗಳನ್ನಿಟ್ಟು 3-4 ದಿನ ಕೊಳೆಯಲು ಬಿಟ್ಟು ಅನಂತರ ಭಾರವನ್ನು ತೆಗೆದು ಕಲಕಿ ಬೇರೆ ತೊಟ್ಟಿಗೆ ವರ್ಗಾಯಿಸಿ, ವರ್ಗಾಯಿಸಿದ ತೊಟ್ಟಿಯಲ್ಲಿ ನೀಲಿಯ ಚರಟ ತಳವೂರಿದ ಅನಂತರ ತೊಟ್ಟಿಗೆ ನೀರನ್ನು ಬಿಟ್ಟು ಕೆಳಗೆ ಇರುವ ಸಾಧಾರಣ ಗಟ್ಟಿಯಾದ ನೀಲಿಯನ್ನು ತಡೆದು ಬಟ್ಟೆಯಲ್ಲಿ ಕಟ್ಟಿ ತೂಗುಹಾಕಿ, ನೀರನ್ನು ಸೋರಲು ಬಿಟ್ಟು ಒಣಗಿಸಿ ಹದ ಮಾಡಿ ಪಡೆಯಲಾಗುತ್ತದೆ. ಬೆಳೆ ಹುಲುಸಾಗಿದ್ದರೆ ನೀರಾವರಿ ಬೆಳೆಯಲಿ ಎಕರೆಗೆ 18ರಿಂದ 20 ಕೆಜಿ ನೀಲಿಯ ಬಣ್ಣ ಪಡೆಯಬಹುದು.
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ